ಬಸವೇಶ್ವರ ವಚನ
ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದೇ ಅಯ್ಯಾ; ಚಂದಿರ ಕುಂದೆ ಕುಂದುವುದಯ್ಯಾ. ಚಂದ್ರಗೆ ರಾಹು ಅಡ್ಡ ಬಂದಲ್ಲಿ ಬೊಬ್ಬಿಟ್ಟಿತ್ತೆ ಅಂಬುಧಿಯು ಅಂಬುಧಿಯನ್ನು ಮುನಿಯಾಪೋಷಿಸಲು ಚಂದ್ರಮನು ಅಡ್ಡ ಬಂದನೆ ಆರಿಗಾರು ಇಲ್ಲ ತಿಳಿದಿರಲಿ ಕೆಟ್ಟವರಿಗೆ ಕೆಳೆಯಿಲ್ಲ ವಿಶ್ವದ ನಂಟ ನೀನೇ ಅಯ್ಯ ಕೂಡಲಸಂಗಮದೇವಾ
ವಚನದ ವಿವರಣೆ - ಜಗದೀಶ ಚಂದ್ರ
ಸಮುದ್ರದಲ್ಲಿ ಭರತ ಇಳಿತ ಎಂಬುದು ಇದ್ದದ್ದೇ. ಹುಣ್ಣಿಮೆ ಹತ್ತಿರ ಬರುತ್ತಿದ್ದಂತೆ ಸಮುದ್ರ ಉಕ್ಕಿ ಅಲೆಗಳು ಭೋರ್ಗರೆಯುತ್ತದೆ. ಚಂದ್ರ ಕ್ಷೀಣವಾಗುತ್ತಿದ್ದಂತೆ ಅಲೆಗಳ ಭೋರ್ಗರೆತವೂ ಕಡಿಮೆಯಾಗುತ್ತದೆ. ಸಮುದ್ರ ಮತ್ತು ಚಂದ್ರನ ಸಂಬಂಧವನ್ನು ಉಲ್ಲೇಖಿಸುತ್ತಾ ಬಸವಣ್ಣನವರು, ಚಂದ್ರನಿಗೆ ರಾಹು ಅಡ್ಡ ಬಂದರೆ ಗ್ರಹಣವಾಗುತ್ತದೆ. ಹಾಗೆಂದು ಸಮುದ್ರವೆಂದಾದರೂ ಚಂದ್ರನಿಗೆ ತೊಂದರೆಯಾಗುತ್ತಿದೆ ಎಂದು ಬೊಬ್ಬಿಟ್ಟಿತೇ? ಇಲ್ಲ. ಇದೆ ರೀತಿ ಸಮುದ್ರವನ್ನೇ ಋಷಿಯೊಬ್ಬರು ಕುಡಿದುಬಿಟ್ಟರು ಎಂದು ಚಂದ್ರನೆಂದಾದರೂ ಸಮುದ್ರದ ಸಹಾಯಕ್ಕೆ ಬಂದನೆ? ಇಲ್ಲ. ಚಂದ್ರನಿಗೂ ಸಮುದ್ರಕ್ಕೂ ಅಷ್ಟೊಂದು ನಂಟಿದ್ದರೂ ಒಬ್ಬರಿಗೊಬ್ಬರು ಸಹಾಯಕ್ಕೆ ಬರಲಿಲ್ಲ. ಅಂದರೆ ಅವರಿಬ್ಬರಲ್ಲೂ ಕೆಳೆ ಇರಲಿಲ್ಲ, ಅಂದರೆ ಗೆಳೆತನ, ಆತ್ಮೀಯತೆ ಇರಲಿಲ್ಲ. ನಮ್ಮ ನಿತ್ಯ ಜೀವನದಲ್ಲೂ ಯಾರಾದರೂ ಸಹಾಯಕ್ಕೆ ಬರುತ್ತಾರೆ ಎಂಬ ಭ್ರಮೆ ಬೇಡ, ನಮಗೆ ನಾವೇ ನೆಂಟರು, ಇತರರಿಗೆ ಕಾಯದೇ ನಮ್ಮ ದಾರಿಯನ್ನು ನಾವೇ ನೋಡಿಕೊಳ್ಳಬೇಕು ಎಂಬ ನೀತಿಯನ್ನು ಈ ವಚನದಲ್ಲಿ ಹೇಳುತ್ತಾರೆ ಬಸವಣ್ಣನವರು. - ಜಗದೀಶ ಚಂದ್ರ
ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದೇ ಎಂಬ ಬಸವಣ್ಣನವರ ಈ ವಚನಕ್ಕೆ ರಾಗೇಶ್ರೀ ರಾಗದಲ್ಲಿ ಸಂಯೋಜಿಸಿ ಕೀಬೋರ್ಡ್ನಲ್ಲಿ ನುಡಿಸಿದ್ದೇನೆ. ಕೇಳಿ ಆನಂದಿಸಿ, ಪ್ರೋತ್ಸಾಹಿಸಿ. ಯೂಟ್ಯೂಬ್ ನ ಹಾಡಿನ ಕೊಂಡಿ ಇಲ್ಲಿದೆ. ವಾದ್ಯ ಸಂಗೀತದೊಂದಿಗೆ ಹಾಡು ಶೀರ್ಷಿಕೆ ತೆರೆಯ ಮೇಲೆ ಬರುತ್ತದೆ. ಸಂಗೀತ ಸಾಹಿತ್ಯ ಎರಡನ್ನು ಆನಂದಿಸಬಹುದು.
No comments:
Post a Comment