Sunday, May 4, 2025

Nagunaguta nali nali / PBS / GK Venkatesh / Hunsur Krishnamurthy / Banga...


ನಗುನಗುತಾ ನಲಿ ನಲಿ / Nagunaguta nali nali

ಪಿ ಬಿ ಶ್ರೀನಿವಾಸ್ / ಜಿ ಕೆ ವೆಂಕಟೇಶ್ / ಹುಣಸೂರ್ ಕೃಷ್ಣಮೂರ್ತಿ / ಬಂಗಾರದ ಮನುಷ್ಯ P B Srinivas / G K Venkatesh / Hunsur Krishnamurthy / Bangarada Manushya

ಬಂಗಾರದ ಮನುಷ್ಯ ಚಿತ್ರಕ್ಕೆ ಹುಣಸೂರ್ ಕೃಷ್ಣಮೂರ್ತಿ ಅವರು ಬರೆದಿರುವ ಈ ಹಾಡು ಒಂದು ಮರೆಯದ ಹಾಡು. ನಮ್ಮ ಸುತ್ತಮುತ್ತಲಿನ ಪ್ರಕೃತಿ, ತಾಯಿಯ ಪ್ರೀತಿ, ಬಾಲ್ಯದಲ್ಲಿ ಗೆಳೆಯರೊಂದಿಗೆ ಕಳೆವ ಕ್ಷಣಗಳು, ಯೌವ್ವನ ಬಂದಾಗಿನ ಕಾಲ, ಮದುವೆಯ ರಸಕ್ಷಣ, ಮುಂದೆ ಸಾಗುವ ಸಂಸಾರ ನೌಕೆ, ಅದರಲ್ಲಿನ ಏರುಪೇರುಗಳು, ನಂತರ ಬರುವ ಮುದಿತನ ಎಲ್ಲವನ್ನೂ ಒಂದೇ ಹಾಡಿನಲ್ಲಿ ಹಿಡಿದಿಟ್ಟಿದ್ದಾರೆ. ಏನೇ ಆದರೂ ಜೀವನವನ್ನು ಅನುಭವಿಸಿ ನಗುನಗುತಾ ಸಂತೋಷದಿಂದಿರಿ ಎಂಬುದೇ ಈ ಕವನದ ಸಾರಾಂಶ.

ಬಂಗಾರದ ಮನುಷ್ಯ ಚಿತ್ರದ ಈ ಹಾಡಿನಲ್ಲಿ ರಾಜಕುಮಾರ್ ಅವರ ಅಭಿನಯ, ಪಿ ಬಿ ಶ್ರೀನಿವಾಸ್ ಅವರ ಗಾಯನ, ಹುಣಸೂರ್ ಕೃಷ್ಣಮೂರ್ತಿ ಅವರ ಸಾಹಿತ್ಯ, ಜಿ ಕೆ ವೆಂಕಟೇಶ್ ಅವರ ಅಮೋಘ ಸಂಗೀತ ಎಲ್ಲವೂ ಒಂದಾಗಿ ರಸದೌತಣವನ್ನೇ ನೀಡಿದೆ .

It is a memorable song that was written by Hunsur Krishnamurthy for the movie Bangarada Manushya. The same song encompasses the natural world around us, the mother's love, childhood memories spent with friends, youth, marriage, old age, our daily lives, their ups and downs, and the charm. The poem's summary, however, is that we should be content and joyful.

This song blends the wonderful melody of GK Venkatesh, the lyrics of Hunsur Krishnamurthy, the vocals of PB Srinivas, and Rajkumar's performance. 

This hit song from Bangarada Manushya (Screened in Bangalore for more than 2 years) is very sweet and lively. nagu naguta nali means always be happy and cheerful.

ನಗು ನಗುತಾ ನಲಿ ನಲಿ ಏನೇ ಆಗಲಿ ಎಲ್ಲಾ ದೇವನ ಕಲೆ ಎ೦ದೇ ನೀ ತಿಳಿ ಅದರಿ೦ದ ನೀ ಕಲಿ / ಜಗವಿದು ಜಾಣ ಚೆಲುವಿನ ತಾಣ ಎಲ್ಲೆಲ್ಲು ರಸದೌತಣ ನಿನಗೆಲ್ಲೆಲ್ಲೂ ರಸದೌತಣ ಲತೆಗಳು ಕುಣಿದಾಗ ಹೂಗಳು ಬಿರಿದಾಗ ನಗು ನಗುತಾ ನಲಿ ನಲಿ ಏನೇ ಆಗಲಿ / ತಾಯಿ ಒಡಲಿನ ಕುಡಿಯಾಗಿ ಜೀವನ ಮೂಡಿ ಬ೦ದು ಚೇತನ ತಾಳಲೆ೦ದು ಅನುದಿನ ಅವಳೆದೆ ಅನುರಾಗ ಕುಡಿಯುತ ಬೆಳೆದಾಗ ನಗು ನಗುತಾ ನಲಿ ನಲಿ ಏನೇ ಆಗಲಿ / ಗೆಳೆಯರ ಜೊತೆಯಲಿ ಕುಣಿಕುಣಿದು ಬೆಳೆಯುವ ಸೊಗಸಿನ ಕಾಲವಿದು ಮು೦ದೆ ಯೌವ್ವನ ಮದುವೆ ಬ೦ಧನ ಎಲ್ಲೆಲ್ಲೂ ಹೊಸ ಜೀವನ ಅಹ ಎಲ್ಲೆಲ್ಲೂ ಹೊಸ ಜೀವನ ಜೊತೆಯದು ದೊರೆತಾಗ ಜೊತೆಯದು ದೊರೆತಾಗ ಮೈಮನ ಮರೆತಾಗ ನಗು ನಗುತಾ ನಲಿ ನಲಿ ಏನೇ ಆಗಲಿ/ ಏರುಪೇರಿನ ಗತಿಯಲ್ಲಿ ಜೀವನ ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ ಅದರೊಳು ಹೊಸದಾದ ರುಚಿ ಇದೆ ಸವಿ ನೋಡ ನಗು ನಗುತಾ ನಲೀ ನಲೀ ಏನೇ ಆಗಲಿ /


Saturday, May 3, 2025

Ramakrishna Devotional song/ ಸಾಹಿತ್ಯ- ಕುವೆಂಪು /ಮೂಲ ಗಾಯನ- ಶ್ರೀ ಪುರುಷೋತ್ತಮ...


ಕುವೆಂಪು ಅವರು ಬರೆದಿರುವ ಈ ಶ್ರೀ ರಾಮಕೃಷ್ಣ ಭಕ್ತಿಗೀತೆಯು ಬಹಳ ಅರ್ಥಗರ್ಭಿತವಾಗಿದೆ. ಧರ್ಮಸಮನ್ವಯತೆ ಬೋಧಿಸಿದ, ಮತಭೇದದ ವಿಷವನ್ನು ಹೋಗಲಾಡಿಸಿದ ರಾಮಕೃಷ್ಣರನ್ನು ನವಯುಗದ ಅವತಾರ ಎಂದು ಸಂಬೋಧಿಸಿದ್ದಾರೆ.  ಎಲ್ಲಿ ನೋಡಿದರೂ ದ್ವೇಷ, ಅಶಾಂತಿ, ಜಾತಿ ಮತ್ಸರ ಮೊದಲಾದ ದುಷ್ಟ ಶಕ್ತಿಗಳೇ ತಾಂಡವವಾಡುತ್ತಿರುವ ಇಂದಿನ ದಿನಗಳಲ್ಲಿ ಈ ಭಕ್ತಗೀತೆಯ ಸಂದೇಶ ಶಾಂತಿ ನೆಮ್ಮದಿಯನ್ನು ಎಲ್ಲರಿಗೂ ಕೊಡಲಿ. ಜೈ ಶ್ರೀ ರಾಮಕೃಷ್ಣ.  

Kuvempu wrote this devotional song on Sri Ramakrishna, and it makes perfect sense. In recent years, Ramakrishna has been recognised as the avatar. Religious conflict, caste rivalry, enmity, and turmoil have become a common occurrence. The aforementioned disorders were eradicated by Sri Ramakrishna's teachings. This devotional song's message is to promote harmony and serenity of mind for mankind.

ಶ್ರೀ ರಾಮಕೃಷ್ಣ ಭಕ್ತಿಗೀತೆ / ಸಾಹಿತ್ಯ - ಕುವೆಂಪು / ಮೂಲ ಗಾಯನ - ಶ್ರೀ ಪುರುಷೋತ್ತಮಾನಂದ / ಕೀಬೋರ್ಡ್ - ಜಗದೀಶ ಚಂದ್ರ 

Devotional song on Sri Ramakrishna / Lyrics - Kuvempu / Original singer Sri Purushottamananda / Keyboard - Jagadeesha Chandra 

ಬಾ ಶ್ರೀಗುರುದೇವನೆ ಬಾ / 
ಶ್ಯಾಮಲ ಕಾನನ ಶೃಂಗ ತರಂಗಿತ  
ಸಹ್ಯಾದ್ರಿಯ ಸನ್ಮಂದಿರಕೆ 
ಚಿನ್ಮಯ ಮಮ ಹೃನ್ಮಂದಿರಕೆ || 

ವಂಗಮಾತೆಯಲಿ ಜನ್ಮವನೆತ್ತಿ  
ದಿವ್ಯಸಮನ್ವಯ ಧರ್ಮವ ಬಿತ್ತಿ
ಮತಭೇದದ ವಿಷವನು ಹೋಗಾಡಿ 
ಲೋಕದ ದೃಷ್ಟಿಗೆ ಸಮತೆಯ ನೀಡಿ 
ಕಾಪಾಡಿದ ಪಾವನ ಮೂರುತಿಯೇ ಬಾ  ||

ಹೇ ನವಯುಗದವತಾರ   
ಪೂರ್ವದಿಗಂತದಿ ಕಾಂತಿಯು ಮೂಡಿ 
ನಾಡಿನ ಕತ್ತಲೆಯನು ಹೋಗಾಡಿ  
ಮೈದೋರುವ ತೆರದಲಿ ನೀನಿಂದು
ನಮ್ಮೀ ವನಗೃಹಕೈತಂದು   
ನಮ್ಮೆದೆಗತ್ತಲ ಪರಿಹರಿಸಿ 
ಸುಖಶಾಂತಿಯ ಕಾಂತಿಯ ಬರಿಸಿ 
ಕೃಪೆಗೈ, ಓ ಮಮ ದೀನಬಂಧು  ಬಾ  || 

T076, R191 Spd95 Sustain

Friday, May 2, 2025

Ganesha pancharatna /Keyboard / Jagadeesha Chandra / ಗಣೇಶ ಪಂಚರತ್ನ / ಶಂಕರ...


ಮುದಾಕರಾತ್ತ ಮೋದಕಂ / Mudakaratha Modakam in Ragamalike - Lord Ganesha Devotional - Shri Shankaracharya - In keyboard - B S Jagadeesha Chandra 

ಹಂಸಧ್ವನಿ  ರಾಗ 
ಮುದಾಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಮ್ ।
ಕಳಾಧರಾವತಂಸಕಂ ವಿಲಾಸಿಲೋಕ ರಕ್ಷಕಮ್ ।
ಅನಾಯಕೈಕ ನಾಯಕಂ ವಿನಾಶಿತೇಭ ದೈತ್ಯಕಮ್ ।
ನತಾಶುಭಾಶು ನಾಶಕಂ ನಮಾಮಿ ತಂ ವಿನಾಯಕಮ್ ॥ 1 ॥  

ಮಲಹರಿ ರಾಗ 
ನತೇತರಾತಿ ಭೀಕರಂ ನವೋದಿತಾರ್ಕ ಭಾಸ್ವರಮ್ ।
ನಮತ್ಸುರಾರಿ ನಿರ್ಜರಂ ನತಾಧಿಕಾಪದುದ್ಢರಮ್ ।
ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಮ್ ।
ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಮ್ ॥ 2 ॥
 
ಕಲ್ಯಾಣವಸಂತ 
ಸಮಸ್ತ ಲೋಕ ಶಂಕರಂ ನಿರಸ್ತ ದೈತ್ಯ ಕುಂಜರಮ್ ।
ದರೇತರೋದರಂ ವರಂ ವರೇಭ ವಕ್ತ್ರಮಕ್ಷರಮ್ ।
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಮ್ ।
ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಮ್ ॥ 3 ॥

ಕುಂತಲವರಾಳಿ 
ಅಕಿಂಚನಾರ್ತಿ ಮಾರ್ಜನಂ ಚಿರಂತನೋಕ್ತಿ ಭಾಜನಮ್ ।
ಪುರಾರಿ ಪೂರ್ವ ನಂದನಂ ಸುರಾರಿ ಗರ್ವ ಚರ್ವಣಮ್ ।
ಪ್ರಪಂಚ ನಾಶ ಭೀಷಣಂ ಧನಂಜಯಾದಿ ಭೂಷಣಮ್ ।
ಕಪೋಲ ದಾನವಾರಣಂ ಭಜೇ ಪುರಾಣ ವಾರಣಮ್ ॥ 4 ॥

ಮಧ್ಯಮಾವತಿ 
ನಿತಾಂತ ಕಾಂತಿ ದಂತ ಕಾಂತಿ ಮಂತ ಕಾಂತಿ ಕಾತ್ಮಜಮ್ ।
ಅಚಿಂತ್ಯ ರೂಪಮಂತ ಹೀನ ಮಂತರಾಯ ಕೃಂತನಮ್ ।
ಹೃದಂತರೇ ನಿರಂತರಂ ವಸಂತಮೇವ ಯೋಗಿನಾಮ್ ।
ತಮೇಕದಂತಮೇವ ತಂ ವಿಚಿಂತಯಾಮಿ ಸಂತತಮ್ ॥ 5 ॥

ಹಂಸಧ್ವನಿ 
ಮಹಾಗಣೇಶ ಪಂಚರತ್ನಮಾದರೇಣ ಯೋಽನ್ವಹಮ್ ।
ಪ್ರಜಲ್ಪತಿ ಪ್ರಭಾತಕೇ ಹೃದಿ ಸ್ಮರನ್ ಗಣೇಶ್ವರಮ್ ।
ಅರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಮ್ ।
ಸಮಾಹಿತಾಯು ರಷ್ಟಭೂತಿ ಮಭ್ಯುಪೈತಿ ಸೋಽಚಿರಾತ್ ॥

Wednesday, April 30, 2025

Irabeku Olleyaa Aase / Lyrics - Jagadeesha Chandra / ಕವನದ ಶೀರ್ಷಿಕೆ - ಆಸೆ...


ಆಸೆ Aase

ರಚನೆ - ಜಗದೀಶ ಚಂದ್ರ / Lyrics - Jagadeesha Chandra
ಇರಬೇಕು ಒಳ್ಳೆಯಾ ಆಸೆ ಇರದಿರಲಿ ಕೆಟ್ಟದೀ ಆಸೆ ಅತಿ ಆಸೆಪಟ್ಟು ಗತಿ ಕೇಡು ಆಗಿ ಸಿಕ್ಕುವುದು ಬರಿ ನಿರಾಸೆ // ಬೇಡ ಬೇಡ ಅತಿ ಆಸೆ ಆಗುವುದು ದುಷ್ಟರಾ ಆಸೆ ಅತಿ ದುಷ್ಟ ಆಸೆ ಭ್ರಷ್ಟನ್ನ ಮಾಡಿ ಬಾಳನ್ನೆ ನರಕ ಮಾಡ್ತು // ಆ ಆ ಆ ... ಆ ಆ ಆ ..ಆ ಆ ಆ ಹಣವ ಮಾಡುವಾ ಆಸೆ ದುಪ್ಪಟು ಪಡೆಯುವಾ ಆಸೆ ಇಂಥ ಆಸೆಯು ಹಾಳು ಮಾಡಿಸಿತು ಬದುಕು ಆಯ್ತು ಬರಿ ಗೋಳು ಅಯ್ಯೋ ಇಂಥ ಗೋಳಿನ ಬಾಳು ಪಡೆದು ಏಕೆ ಬದುಕಬೇಕು // ಆ ಆ ಆ ... ಆ ಆ ಆ ..ಆ ಆ ಆ ಕೆಟ್ಟ ಮಾರ್ಗ ವಿ ದುರಾಸೆ ಅದಕೆಂದು ಅಂತ್ಯವೇ ಇಲ್ಲ ಅಂತ ಮಾರ್ಗದಲಿ ನೀವು ಹೋದರೆ ಭ್ರಷ್ಟ ದುಷ್ಟ ಎಂಬ ಬಿರುದು ಅಯ್ಯೋ ಇಂಥ ಹಣೆಯ ಪಟ್ಟಿ ಪಡೆದು ಏಕೆ ಬದುಕಬೇಕು //

ಈ ಕವನದ ಮುಖ್ಯ ಆಶಯ ಆಸೆಯಿಂದ ಆಗುವ ಅನಾಹುತಗಳು. ಇಂದು ಹಣ ಹಾಗೂ ಅಧಿಕಾರದ ಆಸೆಗಳಿಂದ ಅನೇಕರು ಹಾಳಾಗುತ್ತಿದ್ದಾರೆ, ಬಹಳ ಸ್ವಾರ್ಥಿಗಳಾಗಿ, ಸಂಕುಚಿತ ಬುದ್ದಿಯುಳ್ಳವರಾಗಿದ್ದಾರೆ. ತಲೆಮಾರುಗಳಿಗೆ ಆಗುವಷ್ಟು ಹಣವನ್ನು ಕೂಡಿಟ್ಟು ತಮ್ಮ ಮಕ್ಕಳನ್ನು ಹಾಳು ಮಾಡುತ್ತಿದ್ದಾರೆ. ಅವರ ಮಕ್ಕಳಿಗೆ ಓದು ಬರಹ ಏನೂ ಬೇಡ ಅಪ್ಪ ಸಂಪಾದಿಸಿದ ಹಣವನ್ನು ಖರ್ಚು ಮಾಡಿ ಮೋಜು ಮಾಡುವುದಷ್ಟೇ ಕೆಲಸ. ಈ ಧನಪಿಶಾಚಿ ಹಿಡಿದುಬಿಟ್ಟಿತೆಂದರೆ ಅದು ಒಳ್ಳೆಯವರನ್ನು ಭ್ರಷ್ಟರನ್ನಾಗಿ ಮಾಡಿಬಿಡುತ್ತದೆ.
ಮುಖ್ಯವಾದ ಅಂಶವೆಂದರೆ ಅತಿ ಆಸೆ ಗತಿ ಕೇಡು ಎಂಬುದು. ಆಸೆ ಇರಬೇಕು ಆದರೆ ಅತಿ ಆಸೆ ಅಥವಾ ದುರಾಸೆ ಇರಬಾರದು. ಕೆಲವರಂತೂ ಅದರಲ್ಲಿಯೂ ತಾವು ಬೆವರು ಸುರಿಸಿ ಗಳಿಸಿದ ಹಣ ದುಪ್ಪಟ್ಟಾಗುತ್ತದೆ ಎಂಬ ಆಸೆಯಿಂದ ಹಿಂದುಮುಂದು ನೋಡದೆ ಎಲ್ಲೆಲ್ಲಿಯೋ ಹೂಡಿ ಅಸಲು ಹಣವನ್ನು ಕಳೆದು ಕೊಂಡಿದ್ದಾರೆ.
ಹಣಗಳಿಸಲಿ, ಅದರಿಂದ ಮಕ್ಕಳನ್ನು ಚೆನ್ನಾಗಿ ಬೆಳೆಸಲಿ, ಆದರೆ ಆ ಮಕ್ಕಳೂ ಸಹ ತಮ್ಮದೇ ಹಣದಿಂದ ಸಂತೋಷದಿಂದ ಬದುಕುವುದನ್ನು ಕಲಿಯಲಿ ಎಂಬುದು ಈ ಕವನದ ಸಾರಾಂಶ.
ರಾಜನ್ ನಾಗೇಂದ್ರ ಅವರ ಸಂಗೀತ ನಿರ್ದೇಶನದ "ಯಾರು ಯಾರು ನೀ ಯಾರು" ಎಂಬ ಒಂದು ಹಾಸ್ಯಭರಿತ ಹಾಡನ್ನು ನಾಗೇಂದ್ರ ಮತ್ತು ಜಮುನಾ ರಾಣಿ ಅವರು ಹಾಡಿದ್ದಾರೆ. ಸೊಗಸಾದ ಹಾಸ್ಯ ಶೈಲಿಯ ಆ ಹಾಡಿನ ದಾಟಿಯಲ್ಲಿ ನಾನೇ ರಚಿಸಿದ ಈ ಕವನಕ್ಕೆ ರಾಗ ಸಂಯೋಜಿಸಿ ಕೀಬೋರ್ಡ್ ನಲ್ಲಿ ನುಡಿಸಿದ್ದೇನೆ. ಹಳೆಯ ಹಾಡುಗಳು ಕೇಳಲು ಮಧುರ. ನಿಮಗೂ ಇಷ್ಟವಾಗವುದು ಎಂದುಕೊಂಡಿದ್ದೇನೆ.

Tuesday, April 29, 2025

Tande Ninu /AhirBhairav /Music -Jagadeesha Chandra /ತಂದೆನೀನು ತಾಯಿನೀನು/ ಅ...


ಬಸವೇಶ್ವರ ವಚನ 

ತಂದೆ ನೀನು ತಾಯಿ ನೀನು / ಬಸವೇಶ್ವರ ವಚನ / ಅಹಿರ್ ಭೈರವ್ / ಸಂಗೀತ-ಜಗದೀಶ ಚಂದ್ರ
ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು ನೀನಲ್ಲದೆ ಮತ್ತಾರು ಇಲ್ಲ ಹಾಲಲ್ಲದ್ದು ನೀರಲ್ಲದ್ದು ನಿಮ್ಮ ಧರ್ಮ ನಿಮ್ಮಾ ಧರ್ಮ ಕೂಡಲ ಸಂಗಮ ದೇವ

ಬಸವಣ್ಣನವರ ಪ್ರತಿಯೊಂದು ವಚನದಲ್ಲೂ ಏನಾದರೊಂದು ಸಂದೇಶವಿರುತ್ತದೆ. ಇಲ್ಲಿ ದೇವರ ಮುಂದೆ ಭಕ್ತನೊಬ್ಬನ ಸಮರ್ಪಣಾ ಭಾವವನ್ನು ಕಾಣಬಹುದು. 

ಭಕ್ತನು ದೇವರಿಗೆ ತನ್ನನ್ನು ತಾನು ಸಂಪೂರ್ಣವಾಗಿ ಸಮರ್ಪಿಸಿಕೊಂಡಾಗ ಆಗ ದೇವರೇ ಅವನಿಗೆ ತಂದೆ,  ತಾಯಿ,  ಬಂಧು ಬಳಗ ಎಲ್ಲವೂ.  ದೇವರು ತನ್ನನ್ನು ಹಾಲಲ್ಲಾದರೂ ಹಾಕಲಿ,  ನೀರಲ್ಲಾದರೂ ಹಾಕಲಿ, ಹಾಕುವುದು ಅವನ ಧರ್ಮ, ಅನುಭವಿಸುವುದು ತನ್ನ ಧರ್ಮ ಎಂದು ಹೇಳುತ್ತಾನೆ. ದೇವರನ್ನು ಸಮರ್ಪಣಾಭಾವದಿಂದ ಪೂರ್ಣವಾಗಿ ನಂಬಿ, ಅವನು ಏನು ಮಾಡಿದರೂ ಅದನ್ನು ನಾನು  ಅನುಭವಿಸುತ್ತೇನೆ,  ದೇವರು ತಾಯಿಯು ಕಂದನನ್ನು ರಕ್ಷಿಸುವಂತೆ ತನ್ನನ್ನು ರಕ್ಷಿಸುತ್ತಾನೆ ಎಂಬ  ಭರವಸೆ ಮೂಡಿಸಿಕೊಳ್ಳುತ್ತಾನೆ.  ಮುಗ್ಧ ಮಗುವೊಂದು ತಂದೆ ತಾಯಿಯ ರಕ್ಷಣೆಯಲ್ಲಿ ಧೈರ್ಯವಾಗಿ ಇರುವಂತೆ ಇಲ್ಲಿ ಭಕ್ತನು ದೇವರನ್ನು ನಂಬಿ ಧೈರ್ಯದಿಂದ ಇರುತ್ತಾನೆ. 

ದೇವರು ಇದ್ದನೋ ಇಲ್ಲವೋ ಎಂದು ಪರಿತಪಿಸುವುದಕ್ಕಿಂತ ಅವನು ಇದ್ದಾನೆ,  ನನ್ನನ್ನು ಕಾಪಾಡುತ್ತಾನೆ ಎಂಬ ಭಾವನೆಯಿಂದ ಒಳ್ಳೆಯ ಬಾಳನ್ನು ನಡೆಸಿದರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ಸಂದೇಶವನ್ನು ಈ ವಚನ ನೀಡುತ್ತದೆ.  

ತಂದೆ ನೀನು ತಾಯಿ ನೀನು, ಎಂಬ ಬಸವಣ್ಣನವರ ಈ ವಚನಕ್ಕೆ ಅಹಿರ್ ಭೈರವ್ ರಾಗದಲ್ಲಿ ಸಂಯೋಜಿಸಿ  ಕೀಬೋರ್ಡ್ನಲ್ಲಿ  ನುಡಿಸಿದ್ದೇನೆ.   ಕೇಳಿ ಆನಂದಿಸಿ, ಪ್ರೋತ್ಸಾಹಿಸಿ.  ಯೂಟ್ಯೂಬ್ ನ ಹಾಡಿನ ಕೊಂಡಿ ಇಲ್ಲಿದೆ. ವಾದ್ಯ ಸಂಗೀತದೊಂದಿಗೆ ಹಾಡು ಶೀರ್ಷಿಕೆ ತೆರೆಯ ಮೇಲೆ ಬರುತ್ತದೆ. ಸಂಗೀತ ಸಾಹಿತ್ಯ ಎರಡನ್ನು ಆನಂದಿಸಬಹುದು.  

Ivanarava / Abhogi / Basavanna /Music & Keyboard Jagadeesha Chandra / ಇ...


ಬಸವೇಶ್ವರ ವಚನ 

ಇವನಾರವ, ಇವನಾರವ, ಇವನಾರವ ನೆಂದೆನಿಸದಿರಯ್ಯಾ.
ಇವ ನಮ್ಮವ, ಇವ ನಮ್ಮವ, ಇವ ನಮ್ಮವನು  ಎಂದೆನಿಸಯ್ಯಾ.
ಕೂಡಲಸಂಗಮದೇವಾ
ನಿಮ್ಮ ಮನೆಯ ಮಗನು ಎಂದೆನಿಸಯ್ಯಾ.

ಬಸವಣ್ಣನವರ ಪ್ರತಿಯೊಂದು ವಚನದಲ್ಲೂ ಏನಾದರೊಂದು ಸಂದೇಶವಿರುತ್ತದೆ. ಇಲ್ಲಿ ನಾವು ಹೇಗಿರಬೇಕು ,  ಇತರರೊಂದಿಗೆ ಹೇಗಿರಬೇಕು ಎಂದು ಹಿತವಚನವನ್ನು ನೀಡಿದ್ದಾರೆ . 

ಯಾರನ್ನಾದರೂ ನೋಡಿದರೆ ಇವನ್ಯಾರು ಎಂದು ದೂರವಿಡಬೇಡಿ,  ಅವನು ನಮ್ಮವನು ಎಂಬ ಭಾವನೆ ಇದ್ದರೆ ಆಗ ಸುಖ ನಮ್ಮದಾಗುತ್ತದೆ. ಕೇವಲ ನಮ್ಮವನು ಎಂದಾದರೆ ಸಾಲದು ನಮ್ಮ ಮನೆಯವನೇ,  ನಮ್ಮ ಮಗನಂತೆಯೇ ಎಂಬ ಭಾವನೆ ಬಂದರೆ ಸೌಹಾರ್ದತೆ ತಾನೇ ತಾನಾಗಿ ಮೂಡುತ್ತದೆ.  ಅಂದರೆ ಇಲ್ಲಿನ ಮುಖ್ಯ ಸಂದೇಶ,  ನಾವೆಲ್ಲರೂ ಒಂದೇ,  ಬೇಧಭಾವ ಮಾಡಬೇಡಿ ಎಂದು. 

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಾವು ಚಿಕ್ಕಂದಿನಿಂದಲೂ ಇಂತಹ ಒಳ್ಳೆಯ ಉಪದೇಶಗಳನ್ನು ಕೇಳಿ ಕೇಳಿಯೇ ಬೆಳೆಯುತ್ತೇವೆ. ಶಾಂತಿ,  ಸಹನೆ,  ಮರುಕ, ನಾವೆಲ್ಲರೂ ಒಂದೇ ಎಂಬ ಭಾವ,  ನಮ್ಮಂತೆಯೇ ಇತರರು ಇಂತಹ ಭಾವನೆಗಳು ನಮ್ಮಲ್ಲಿ ಹಾಸುಹೊಕ್ಕಾಗಿರುತ್ತದೆ.  

ಎಲ್ಲರೂ ಹೀಗೇ ಭಾವಿಸಿ ನಡೆದರೆ ಎಲ್ಲವೂ ಚೆನ್ನಾಗಿಯೇ ಇರುತ್ತದೆ.  ಆದರೆ ಒಬ್ಬರು ಮಾತ್ರ ಹೀಗಿದ್ದು  ಇನ್ನೊಬ್ಬರು ಅದಕ್ಕೆ ತದ್ವಿರುದ್ಧವಾಗಿ ನಡೆದರೆ ಏನಾಗಬಹುದು?  ಅದೇ ಇಂದು ನಡೆಯುತ್ತಿರುವುದು.  ಒಳ್ಳೆಯತನವನ್ನು ದುರುಪಯೋಗ ಮಾಡಿಕೊಳ್ಳುವವರೇ ಮೇಲುಗೈ ಸಾಧಿಸುತ್ತಿದ್ದಾರೆ.  

ಹೀಗಾಗಿ ಇಂದಿನ ಕಾಲಕ್ಕೆ, ಶಾಂತಿ ಸಹನೆ ಮೊದಲಾದ ಒಳ್ಳೆಯತನವಷ್ಟೇ ಸಾಲದು, ಸಮಯ ಬಂದರೆ ಕೆಚ್ಚೆದೆಯಿಂದ ಸವಾಲನ್ನು ಎದುರಿಸಬೇಕು ಎಂಬ ಉಪದೇಶವನ್ನೂ ಕಲಿಸಬೇಕು. ನಾವು ಇತರರನ್ನು ನಮ್ಮವರಂತೆ ಕಾಣಬೇಕು ನಿಜ, ಆದರೆ ಅದೇ ಒಳ್ಳೆಯತನ ಅವರಲ್ಲಿಯೂ ಇರಬೇಕಲ್ಲವೇ? ನಮ್ಮ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಂಡು ನಮ್ಮ ವಿರುದ್ಧ ತಿರುಗಿಬೀಳುವ ಅನೇಕರು ನಮ್ಮ ನಡುವೆಯೇ ಇದ್ದಾರೆ.  ನಾವು ಎಚ್ಚರಿಕೆಯಿಂದ ಇದ್ದು ಒಳ್ಳೆಯವರಾಗಿ ಇರೋಣ,  ದುರುಪಯೋಗ ಪಡಿಸಿಕೊಂಡು ಕೆಡುಕನ್ನುಂಟು ಮಾಡುವವರಿಗೆ ಸರಿಯಾಗಿ ಪಾಠ ಕಲಿಸುವ ಬುದ್ಧಿಯನ್ನೂ ಕಲಿಯೋಣ.  

ಇವನಾರವ, ಇವನಾರವ ನೆಂದೆನಿಸದಿರಯ್ಯಾ, ಎಂಬ ಬಸವಣ್ಣನವರ ಈ ವಚನಕ್ಕೆ ಅಭೋಗಿ ರಾಗದಲ್ಲಿ ಸಂಯೋಜಿಸಿ  ಕೀಬೋರ್ಡ್ನಲ್ಲಿ  ನುಡಿಸಿದ್ದೇನೆ.   ಕೇಳಿ ಆನಂದಿಸಿ, ಪ್ರೋತ್ಸಾಹಿಸಿ.  ಯೂಟ್ಯೂಬ್ ನ ಹಾಡಿನ ಕೊಂಡಿ ಇಲ್ಲಿದೆ. ವಾದ್ಯ ಸಂಗೀತದೊಂದಿಗೆ ಹಾಡು ಶೀರ್ಷಿಕೆ ತೆರೆಯ ಮೇಲೆ ಬರುತ್ತದೆ. ಸಂಗೀತ ಸಾಹಿತ್ಯ ಎರಡನ್ನು ಆನಂದಿಸಬಹುದು.  

Monday, April 28, 2025

Chandrodayake Ambudhi / Basava Vachana / Music, Keyboard - Jagadeesha Ch...


ಬಸವೇಶ್ವರ ವಚನ 

ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದೇ ಅಯ್ಯಾ; ಚಂದಿರ ಕುಂದೆ ಕುಂದುವುದಯ್ಯಾ. ಚಂದ್ರಗೆ ರಾಹು ಅಡ್ಡ ಬಂದಲ್ಲಿ ಬೊಬ್ಬಿಟ್ಟಿತ್ತೆ ಅಂಬುಧಿಯು ಅಂಬುಧಿಯನ್ನು ಮುನಿಯಾಪೋಷಿಸಲು ಚಂದ್ರಮನು ಅಡ್ಡ ಬಂದನೆ ಆರಿಗಾರು ಇಲ್ಲ ತಿಳಿದಿರಲಿ ಕೆಟ್ಟವರಿಗೆ ಕೆಳೆಯಿಲ್ಲ ವಿಶ್ವದ ನಂಟ ನೀನೇ ಅಯ್ಯ ಕೂಡಲಸಂಗಮದೇವಾ

ವಚನದ ವಿವರಣೆ - ಜಗದೀಶ ಚಂದ್ರ

ಸಮುದ್ರದಲ್ಲಿ ಭರತ ಇಳಿತ ಎಂಬುದು ಇದ್ದದ್ದೇ. ಹುಣ್ಣಿಮೆ ಹತ್ತಿರ ಬರುತ್ತಿದ್ದಂತೆ ಸಮುದ್ರ ಉಕ್ಕಿ ಅಲೆಗಳು ಭೋರ್ಗರೆಯುತ್ತದೆ. ಚಂದ್ರ ಕ್ಷೀಣವಾಗುತ್ತಿದ್ದಂತೆ ಅಲೆಗಳ ಭೋರ್ಗರೆತವೂ ಕಡಿಮೆಯಾಗುತ್ತದೆ. ಸಮುದ್ರ ಮತ್ತು ಚಂದ್ರನ  ಸಂಬಂಧವನ್ನು ಉಲ್ಲೇಖಿಸುತ್ತಾ ಬಸವಣ್ಣನವರು, ಚಂದ್ರನಿಗೆ ರಾಹು ಅಡ್ಡ ಬಂದರೆ ಗ್ರಹಣವಾಗುತ್ತದೆ. ಹಾಗೆಂದು ಸಮುದ್ರವೆಂದಾದರೂ ಚಂದ್ರನಿಗೆ ತೊಂದರೆಯಾಗುತ್ತಿದೆ ಎಂದು ಬೊಬ್ಬಿಟ್ಟಿತೇ? ಇಲ್ಲ. ಇದೆ ರೀತಿ ಸಮುದ್ರವನ್ನೇ ಋಷಿಯೊಬ್ಬರು ಕುಡಿದುಬಿಟ್ಟರು ಎಂದು ಚಂದ್ರನೆಂದಾದರೂ ಸಮುದ್ರದ ಸಹಾಯಕ್ಕೆ ಬಂದನೆ? ಇಲ್ಲ. ಚಂದ್ರನಿಗೂ ಸಮುದ್ರಕ್ಕೂ ಅಷ್ಟೊಂದು ನಂಟಿದ್ದರೂ ಒಬ್ಬರಿಗೊಬ್ಬರು ಸಹಾಯಕ್ಕೆ ಬರಲಿಲ್ಲ. ಅಂದರೆ ಅವರಿಬ್ಬರಲ್ಲೂ ಕೆಳೆ ಇರಲಿಲ್ಲ, ಅಂದರೆ ಗೆಳೆತನ, ಆತ್ಮೀಯತೆ ಇರಲಿಲ್ಲ. ನಮ್ಮ ನಿತ್ಯ  ಜೀವನದಲ್ಲೂ ಯಾರಾದರೂ ಸಹಾಯಕ್ಕೆ ಬರುತ್ತಾರೆ ಎಂಬ ಭ್ರಮೆ ಬೇಡ, ನಮಗೆ ನಾವೇ ನೆಂಟರು, ಇತರರಿಗೆ ಕಾಯದೇ ನಮ್ಮ ದಾರಿಯನ್ನು ನಾವೇ ನೋಡಿಕೊಳ್ಳಬೇಕು ಎಂಬ ನೀತಿಯನ್ನು ಈ ವಚನದಲ್ಲಿ ಹೇಳುತ್ತಾರೆ ಬಸವಣ್ಣನವರು. -  ಜಗದೀಶ ಚಂದ್ರ

ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದೇ ಎಂಬ ಬಸವಣ್ಣನವರ ಈ ವಚನಕ್ಕೆ ರಾಗೇಶ್ರೀ ರಾಗದಲ್ಲಿ ಸಂಯೋಜಿಸಿ  ಕೀಬೋರ್ಡ್ನಲ್ಲಿ  ನುಡಿಸಿದ್ದೇನೆ.   ಕೇಳಿ ಆನಂದಿಸಿ, ಪ್ರೋತ್ಸಾಹಿಸಿ.  ಯೂಟ್ಯೂಬ್ ನ ಹಾಡಿನ ಕೊಂಡಿ ಇಲ್ಲಿದೆ. ವಾದ್ಯ ಸಂಗೀತದೊಂದಿಗೆ ಹಾಡು ಶೀರ್ಷಿಕೆ ತೆರೆಯ ಮೇಲೆ ಬರುತ್ತದೆ. ಸಂಗೀತ ಸಾಹಿತ್ಯ ಎರಡನ್ನು ಆನಂದಿಸಬಹುದು.  

ಬೀಸುವ ಪದ - Folk song sung while grinding grains / ಕನ್ನಡ ಜಾನಪದ ಹಾಡು Keyb...

ಬೀಸುವ ಪದ   Folk song sung while grinding grains.  Folk song of Karnataka    ಕನ್ನಡ ಜಾನಪದ ಹಾಡು  ಕೀಬೋರ್ಡ್ - ಜಗದೀಶ ಚಂದ್ರ  Keyboard - Jagadeesha ...